ಪರಿಸರ ಸಂರಕ್ಷಣೆ ಮತ್ತು ಇಂಗಾಲದ ಹೊರಸೂಸುವಿಕೆ ಕಡಿತಗೊಳಿಸುವ ನಿಟ್ಟಿನಲ್ಲಿ ಚೀನಾ ಮಹತ್ವದ ಹೆಜ್ಜೆಯಿಟ್ಟಿದೆ. ಟಿಬೆಟ್ ಪ್ರಸ್ಥಭೂಮಿಯಲ್ಲಿ ವಿಶ್ವದ ಅತಿದೊಡ್ಡ ಸೌರಶಕ್ತಿ ಘಟಕವನ್ನು ನಿರ್ಮಿಸಲು ಚೀನಾ ಸಜ್ಜಾಗಿದೆ ಎಂದು ಇತ್ತೀಚೆಗೆ ಚೀನಾ ಸರ್ಕಾರದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಬೃಹತ್ ಸೌರ ಘಟಕವು 610 ಚದರ ಕಿಲೋಮೀಟರ್‌ನಷ್ಟು ವಿಸ್ತೀರ್ಣವನ್ನು ಹೊಂದಿದ್ದು, ಇದು ಅಮೆರಿಕದ ಷಿಕಾಗೊ ನಗರದಷ್ಟು ದೊಡ್ಡದಾಗಿರಲಿದೆ ಎಂದು ಅಂದಾಜಿಸಲಾಗಿದೆ. ಚೀನಾವು ಅತ್ಯಂತ ವೇಗವಾಗಿ ಸೌರ ಫಲಕಗಳನ್ನು ಸ್ಥಾಪಿಸುತ್ತಿದ್ದು, ಇಂಗಾಲದ ಹೊರಸೂಸುವಿಕೆಯನ್ನು ಗಣನೀಯವಾಗಿ ಕಡಿಮೆಗೊಳಿಸಲು ಪಣ ತೊಟ್ಟಿದೆ. ಒಂದು ಅಧ್ಯಯನದ ಪ್ರಕಾರ, 2024ರ ಮಾರ್ಚ್‌ನಲ್ಲಿ ಇದ್ದ ಇಂಗಾಲದ ಹೊರಸೂಸುವಿಕೆಯು 2025ರ ಮೊದಲ 6 ತಿಂಗಳಲ್ಲಿ ಶೇಕಡಾ 1ರಷ್ಟು ಕಡಿಮೆಯಾಗಿದೆ.
2025ರ ಮೊದಲ ಆರು ತಿಂಗಳುಗಳಲ್ಲಿ ಚೀನಾವು 212 ಗಿಗಾವ್ಯಾಟ್ ಸಾಮರ್ಥ್ಯದ ಸೌರಶಕ್ತಿ ಘಟಕಗಳನ್ನು ಸ್ಥಾಪಿಸಿದೆ. ಇದು 2024ರ ಇಡೀ ವರ್ಷ ಅಮೆರಿಕ ಸ್ಥಾಪಿಸಿದ್ದ 178 ಗಿಗಾವ್ಯಾಟ್ ಸಾಮರ್ಥ್ಯದ ಘಟಕಗಳಿಗಿಂತ ಹೆಚ್ಚಾಗಿದೆ ಎಂದು ಅಧ್ಯಯನವೊಂದು ತಿಳಿಸಿದೆ. ಈಗಾಗಲೇ ಚೀನಾದಲ್ಲಿ ಜಲವಿದ್ಯುತ್ ಪ್ರಮಾಣವನ್ನು ಮೀರಿ ಸೌರಶಕ್ತಿ ಬಳಕೆ ಹೆಚ್ಚಳವಾಗಿದ್ದು, ಸದ್ಯದಲ್ಲೇ ಪವನಶಕ್ತಿಯನ್ನೂ ಹಿಂದಿಕ್ಕಿ ದೇಶದ ಹಸಿರು ಇಂಧನದ ಅತಿದೊಡ್ಡ ಮೂಲವಾಗಿ ಸೌರಶಕ್ತಿ ಹೊರಹೊಮ್ಮಲಿದೆ. ಈ ಕ್ರಮವು ಜಾಗತಿಕ ಹವಾಮಾನ ಬದಲಾವಣೆಯ ವಿರುದ್ಧದ ಹೋರಾಟದಲ್ಲಿ ಚೀನಾದ ಬದ್ಧತೆಯನ್ನು ಮತ್ತಷ್ಟು ಬಲಪಡಿಸುತ್ತದೆ.